ಬಾಗಲಕೋಟೆ: ಜಾತ್ರೆ ದಿನವೇ ತಗಡಿನ ಶೆಡ್ ಮೇಲೆ ಬಿದ್ದ ಹೈಟೆನ್ಶನ್ ವಿದ್ಯುತ್ ತಂತಿ; ಇಬ್ಬರು ದುರ್ಮರಣ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ದಾಸರಮಡ್ಡಿಯಲ್ಲಿ ಹೈಟೆನ್ಶನ್ ವಿದ್ಯುತ್ ತಂತಿ ತುಂಡಾಗಿ ತಗಡಿನ ಶೆಡ್ ಮನೆ ಮೇಲೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ದಾಸರಮಡ್ಡಿಯಲ್ಲಿ ಹೈಟೆನ್ಶನ್ ವಿದ್ಯುತ್ ತಂತಿ ತುಂಡಾಗಿ ತಗಡಿನ ಶೆಡ್ ಮನೆ ಮೇಲೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.ಮೃತರು 22 ವರ್ಷದ ಸಂತೋಷ ಸುಣಗಾರ ಮತ್ತು ಸಂತೋಷ್ ಅತ್ತೆ 32 ವರ್ಷದ ಶೋಭಾ ಹುಲ್ಲೆಣ್ಣವರ ಎಂದು ತಿಳಿದುಬಂದಿದೆ. ಇನ್ನುಳಿದಂತೆ ಶ್ರೀಕಾಂತ್, ಮಹೇಶ್, ಕಸ್ತೂರಿ ಹಾಗೂ ಸಂಗೀತಾ ಕಾಮಶೆಟ್ಟಿ ಸೇರಿ ನಾಲ್ವರಿಗೆ ಗಾಯವಾಗಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಬಾಗಲಕೋಟೆಯ ದಾಸರಮಡ್ಡಿಯಲ್ಲಿ ದುರ್ಗಾದೇವಿ ಜಾತ್ರೆಯಿತ್ತು. ಜಾತ್ರೆಗಾಗಿ ಸಂಬಂಧಿಕರು ಮನೆಗೆ ಬಂದಿದ್ದರು ಈ ವೇಳೆ ಅವಘಡ ಸಂಭವಿಸಿದೆ.ಇನ್ನು ಮೃತ ಸಂತೋಷ್ ಹಾಗೂ ಗಾಯಗೊಂಡಿರುವ ಸಂಗೀತಾ ನಡುವೆ ನಿಶ್ಚಿತಾರ್ಥವಾಗಿದ್ದು ಇದೇ‌ ಜೂನ್ 28ರಂದು ಮದುವೆ ನಿಗದಿಯಾಗಿತ್ತು. ಆದರೆ ದುರಾದೃಷ್ಟವಶಾತ್ ಸಂತೋಷ್ ಮೃತಪಟ್ಟಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ‌ ತೇರದಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.